ಉತ್ತರ ಆಫ್ರಿಕದ ಮಧ್ಯದಲ್ಲಿ ಮೆಡಿಟರೇನಿಯನ್ ಸಮುದ್ರ ತೀರದ ಒಂದು ರಾಷ್ಟ್ರ. ಲಿಬಿಯನ್ ಅರಬ್ ಪ್ರಜಾಪ್ರಭುತ್ವ ದೇಶವೆಂದು ಕರೆಯುವ ಇದನ್ನು ಪೂರ್ವದಲ್ಲಿ ಈಜಿಪ್ಟ್, ಆಗ್ನೇಯದಲ್ಲಿ ಸೂಡಾನ್, ದಕ್ಷಿಣದಲ್ಲಿ ಜಾಡ್ ಮತ್ತು ನೈಜರ್, ಪಶ್ಚಿಮದಲ್ಲಿ ಆಲ್ಜೀರಿಯ, ವಾಯವ್ಯದಲ್ಲಿ ಟ್ಯೂನೀಷಿಯ, ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರ ಸುತ್ತುವರಿದಿವೆ. ಲಿಬಿಯ ಸಮಾಜವಾದಿ ಅರಬ್ ಗಣರಾಜ್ಯವೆಂದೂ ಗುರುತಿಸುವ ಈ ದೇಶದ ಸೇ. 90 ಭಾಗ ಸಹಾರ ಮರುಭೂಮಿಯಿಂದ ಕೂಡಿದೆ. ಉತ್ತರ-ದಕ್ಷಿಣವಾಗಿ 1,497 ಕಿಮೀ, ಪೂರ್ವ-ಪಶ್ಚಿಮವಾಗಿ 1,690 ಕಿಮೀ, ಸಮುದ್ರತೀರ 1,685 ಕಿಮೀ ಇರುವ ಈ ದೇಶದ ಒಟ್ಟು ವಿಸ್ತೀರ್ಣ 1,759,540 ಚ.ಕಿಮೀ. ಜನಸಂಖ್ಯೆ 63,87,000 (2000). ಈ ದೇಶಕ್ಕೆ ಪರಸ್ಪರ 611 ಕಿಮೀ ದೂರದಲ್ಲಿರುವ ಎರಡು ರಾಜಧಾನಿಗಳಿವೆ. ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ದೇಶದ ಉತ್ತರ ಭಾಗದ ಪೂರ್ವಕ್ಕೆ ರಾಜಧಾನಿ ಜಿಂಗಾಸಿ ಇದ್ದರೆ, ಇದರ ಪಶ್ಚಿಮಕ್ಕೆ ಪ್ರಸಿದ್ಧ ನಗರ ಟ್ರೆಪೊಲಿ ರಾಜಧಾನಿ ಇದೆ.

ದೇಶದ ಹೆಚ್ಚು ಭಾಗ ಸಹಾರ ಮರುಭೂಮಿಯಿಂದ ಆವೃತವಾಗಿದ್ದು ಇಲ್ಲಿನ ಅಪಾರ ಮರಳುರಾಶಿ ಹವಾಮಾನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಉತ್ತರದ ಮೆಡಿಟರೇನಿಯನ್ ಸಮುದ್ರದ ಕಡೆಯಿಂದ ಬೀಸುವ ಗಾಳಿ ಈ ದೇಶಕ್ಕೆ ತಂಪನ್ನೆರದರೂ ಇಲ್ಲಿನ ಹವೆ 22⁰ಉಷ್ಣತೆಯಿಂದ ಕೂಡಿರುತ್ತದೆ. ಲಿಬಿಯದ ಉತ್ತರದಲ್ಲಿ ಪೂರ್ವ ಪಶ್ಚಿಮ ಭಾಗಗಳಲ್ಲಿ ವರ್ಷಕ್ಕೆ  51 ಸೆಂಮೀ ಮಳೆಯಾಗುವುದುಂಟು. ಮರುಭೂಮಿಯ ಹವಾಮಾನವಿರುವ ಲಿಬಿಯ ಹೆಚ್ಚು ಪ್ರದೇಶ ದಿನದಲ್ಲಿ ಹೆಚ್ಚು ಶಾಖದಿಂದ ಕೂಡಿದ್ದರೆ ರಾತ್ರಿ ಬಹು ಚಳಿಯಿಂದ ಕೂಡಿರುತ್ತದೆ. ಲಿಬಿಯದ ವಾಯವ್ಯದಲ್ಲಿ ಸಮುದ್ರ ತೀರದ ಮೈದಾನ ಪ್ರದೇಶ ಮತ್ತು ಈಶಾನ್ಯದ ಪ್ರಸ್ತಭೂಮಿ ಇವು ಫಲವತ್ತಿನಿಂದ ಕೂಡಿವೆ. ಮರುಭೂಮಿಯನ್ನು ಬಿಟ್ಟು ಉತ್ತರದಲ್ಲಿ ಕೆಲವು ಕಡೆ ಮಳೆ ಬೀಳುವ ಪ್ರದೇಶಗಳಲ್ಲಿ ಮಳೆಯ ಪ್ರಮಾಣಕ್ಕೆ ಹಾಗೂ ಮೆಡಿಟೆರೀನಿಯನ್ ಸಮುದ್ರದ ಕಡೆಯಿಂದ ಬೀಸುವ ತಂಗಾಳಿಗನುಗುಣವಾಗಿ ಕೆಲವು ಜಾತಿಯ ಹುಲ್ಲು, ಕುರುಚಲುಗಿಡ ಬೆಳೆಯುತ್ತವೆ. ಅತ್ಯಂತ ಉತ್ತರದಲ್ಲಿರುವ ಕಾಡು ಪ್ರದೇಶದಲ್ಲಿ ಶಂಕುಫಲಿ ಎಂಬ ಸಸ್ಯವರ್ಗಕ್ಕೆ ಸೇರಿದ (ಜೂನಿಫರ್) ಮತ್ತು ಲೆನ್‍ಟಿಸ್ಕ ಮರಗಳನ್ನು ಕಾಣಬಹುದು. ಮರುಭೂಮಿಯ ಪ್ರಾಣಿಗಳಲ್ಲಿ ರೊಡೆಂಟ್ಸ್ ಜಾತಿಗೆ ಸೇರಿದವು ಮತ್ತು ವಿಷಪೂರಿತ ಹಾವುಗಳು, ಮೊಲ, ನರಿ, ಕತ್ತೆ, ಕಿರುಬ, ಕೆಂಪುನರಿ, ಸ್ಕಂಕ್ಸ್, ಚಿಂಕೆ, ಕಾಡುಬೆಕ್ಕು ಈ ಪ್ರದೇಶದಲ್ಲಿ ಕಂಡುಬರುತ್ತವೆ. ಕಾಡುಪಾರಿವಾಳ, ಹದ್ದು, ಕವುಜುಗಹಕ್ಕಿ, ಬಾನಾಡಿ, ಮತ್ತು ಪ್ರೇರಿಹುಲ್ಲುಗಾವಲಿನಲ್ಲಿರುವಂತಹ ಕುಕ್ಕುಟ ಜಾತಿಯ ಪಕ್ಷಿಗಳು, ಗಿಡುಗ, ರಣಹದ್ದು ಇತ್ಯಾದಿ ಪಕ್ಷಿಗಳನ್ನೂ ಇಲ್ಲಿ ಕಾಣಬಹುದು. ದೇಶದ ಉತ್ತರದಲ್ಲಿನ ಮೆಡಿಟೆರೇನಿಯನ್ ಸಮುದ್ರಕ್ಕೆ ಹತ್ತಿರವಾದ ಹಾಗೂ ಸ್ವಲ್ಪ ಮಳೆ ಬೀಳುವ ಫಲವತ್ತಾದ ಭೂಪ್ರದೇಶದ ರೈತರು ನೆಲಗಡಲೆ, ಬಾರ್ಲಿ, ಗೋದಿ, ಟೊಮ್ಯಾಟೊ, ವಿವಿಧ ಫಲಗಳನ್ನು ಬೆಳೆಯುವುದರ ಜೊತೆಗೆ ಕುರಿ, ಕೋಳಿ, ದನ, ಮೇಕೆ, ಒಂಟೆ ಮುಂತಾದ ಪ್ರಾಣಿಗ ಳನ್ನೂ ಸಾಕುವುದುಂಟು. ಓಯಸಿಸ್‍ಗಳ ಸುತ್ತಲೂ ಕೆಲವು ತಂಪು ತಂಗುದಾಣ ಗಳಲ್ಲೂ ಖರ್ಜೂರದ ಮರಗಳನ್ನು ಬೆಳೆಸಿ ರಕ್ಷಿಸಿಕೊಂಡು ಬಂದಿದ್ದಾರೆ.
ಮರುಳುಗಾಡಿನ ಈ ದೇಶ ಪ್ರಪಂಚದ ಬಡದೇಶಗಳಲ್ಲಿ ಒಂದಾಗಿದ್ದು ಗ್ರೇಟ್ ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನೆರವನ್ನು ಅವಲಂಬಿಸಿ ಕೊಂಡಿತ್ತು. ಆದರೆ 1959ರಲ್ಲಿ ಈ ದೇಶದ ಆರ್ಥಿಕ ಸ್ಥಿತಿಯನ್ನೇ ಬದಲಾಯಿಸಿದ ತೈಲನಿಕ್ಷೇಪ ಶೋಧನೆಯಿಂದಾಗಿ ಇಂದು ಈ ದೇಶ ಸ್ವಾವಲಂಬಿಯಾಗಿದೆ. ಅಪಾರ ತೈಲೋತ್ಪತ್ತಿಯಿಂದ ಗಳಿಸಿದ ಹಣವನ್ನು ದೇಶದ ಹಾಗೂ ಕೃಷಿ ಸಂಬಂಧ ಕಾರ್ಯಗಳ ಅಭಿವೃದ್ಧಿಗೆ ಉಪಯೋಗಿಸ ಲಾಗುತ್ತಿದೆ. ದೇಶದ ಒಟ್ಟು ಉತ್ಪತ್ತಿಯಲ್ಲಿ ತೈಲೋದ್ಯಮ ದಿಂದ ಬರುವ ಸೇ. 90 ಭಾಗ ಹಣವನ್ನು ವಿದ್ಯುತ್ ಉತ್ಪಾದನೆ, ನೀರಾವರಿ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೂ ಮಿಲಿಟರಿ ಶಸ್ತ್ರಾಸ್ತ್ರ ಗಳನ್ನು ಖರೀದಿಸಲೂ ಬಳಸಲಾ ಗುತ್ತಿದೆ. ಉತ್ತರ ಮಧ್ಯಲಿಬಿಯ ದಿಂದ ಮೆಡಿಟರೇನಿಯನ್ ಸಮುದ್ರ ತೀರದ ಬಂದರುಗಳಿಗೆ ಕೊಳವೆಗಳ ಮೂಲಕ ತೈಲವನ್ನು ಸಾಗಿಸಿ ಅಲ್ಲಿಂದ ಇತರ ದೇಶಗಳಿಗೆ ಹಡಗುಗಳ ಮೂಲಕ ರವಾನಿಸಲಾಗುವುದು. ಈ ಉದ್ಯಮ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಲಿಬಿಯನ್ನರಿಗೆ ಉದ್ಯೋಗ ದೊರಕಿಸಿದೆ. ಇಂದು ತೈಲೋತ್ಪತ್ತಿಯ ಪ್ರಮುಖ ದೇಶಗಳಲ್ಲಿ ಲಿಬಿಯ ಕೂಡ ಸೇರಿದೆ. ಮತ್ಸ್ಯೋದ್ಯಮ, ಹೊಗೆಸೊಪ್ಪು ಸಂಸ್ಕರಿಸುವಿಕೆ, ನೇಯ್ಗೆ ಹಾಗೂ ಬಟ್ಟೆಗಳಿಗೆ ಬಣ್ಣ ಹಾಕುವಿಕೆ ಮತ್ತು ವಿವಿಧ ಕುಶಲ ಕೈಗಾರಿಕೆಗಳೂ ಅಭಿವೃದ್ಧಿ ಹೊಂದಿವೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗದಷ್ಟು ಜನರು ಲಿಬಿಯದ ಉತ್ತರದಲ್ಲಿ ಮೆಡಿಟೆರೇನಿಯನ್ ಸಮುದ್ರ ತೀರದ ಬಂದರು ನಗರಗಳಲ್ಲಿ ವಾಸ ಮಾಡುತ್ತರೆ. ತೈಲೋದ್ಯಮದ ಬೆಳೆವಣಿಗೆ ಯೊಡನೆ ನಗರಗಳಲ್ಲಿ ಜನಸಂಖ್ಯೆಯೂ ಬೆಳೆಯತೊಡಗಿದೆ. ಹಳ್ಳಿಗಾಡುಗಳಲ್ಲಿದ್ದ ಜನರು ಉತ್ತಮ ಉದ್ಯೋಗ, ಜೀವನ ಅರಸುತ್ತ ಪಟ್ಟಣಗಳಿಗೆ ವಲಸೆ ಬಂದಿದ್ದಾರೆ. ಈ ದೇಶದ ವಿಶಾಲ ಭೂಪ್ರದೇಶ, ಮರಳುಗಾಡು, ಚಾರಿತ್ರಿಕ ಘಟನೆಗಳೆಲ್ಲವೂ ಇಲ್ಲಿನ ಜನರ ಜೀವನದ ಮೇಲೆ ಪ್ರಭಾವ ಬೀರಿದ್ದು ಜೀವನ ಕ್ರಮದಲ್ಲಿ ವೈವಿಧ್ಯವನ್ನು ಗುರುತಿಸಬಹುದು. ಪೂರ್ವ ಲಿಬಿಯದ ಜನರ ಪೂರ್ವಜರು ಹೆಚ್ಚಾಗಿ ಅರಬ್ಬರಾದರೆ ಪಶ್ಚಿಮ ಲಿಬಿಯ ಹಾಗೂ ಇತರೆಡೆಗಳಲ್ಲಿನ ಜನರ ಪೂರ್ವಜರು ಅರಬ್ ಮತ್ತು ಅಲ್ಲಿನ ಮೂಲ ನಿವಾಸಿಗಳಾದ ಬರ್ಬರ್ ಜನರ ಸಂಮಿಶ್ರ ಸಂಜಾತರಾಗಿದ್ದಾರೆ. ಅರಬ್ ಭಾಷೆಯನ್ನು ಬಳಸುವ ಇವರು ಇಸ್ಲಾಮ್ ಧರ್ಮದ ಅನುಯಾಯಿಗಳು. ಮೂಲ ನಿವಾಸಿಗಳಾದ ಬರ್ಬರರು ತಮ್ಮ ಮೂಲ ಹೆಮಿಟಿಕ್ ಭಾಷೆಯನ್ನು ಬಳಸಿದರೂ ಬರೆಯಲು ಅರಬ್ ಲಿಪಿಯನ್ನು ಅಳವಡಿಸಿಕೊಂಡಿದ್ದಾರೆ. ಲಿಬಿಯದಲ್ಲಿ ಸಾವಿರಾರು ಮಂದಿ ಯೆಹೂದ್ಯರೂ ವಾಸವಾಗಿದ್ದಾರೆ. ಇನ್ನುಳಿದ ಅಲೆಮಾರಿ ಜನರು ತಮ್ಮ ದನಕರುಗಳಿಗೆ, ಕುರಿ ಒಂಟೆಗಳಿಗೆ ಮೇವನ್ನು ಅರಸುತ್ತಾ ಓಯಸಿಸ್‍ಗಳಲ್ಲಿ ತಂಗುತ್ತಾ ಜೀವನ ಸಾಗಿಸುವುದುಂಟು. ಲಿಬಿಯನ್ನರಿಗೆ ಹಳ್ಳಿ, ಗ್ರಾಮ, ಪಟ್ಟಣಗಳ ಕಲ್ಪನೆಯೇ ಇರಲಿಲ್ಲ. 16ನೆಯ ಶತಮಾನದಲ್ಲಿ ಟರ್ಕರು ಈ ಪ್ರದೇಶವನ್ನು ಆಕ್ರಮಿಸಿದಾಗ ಸೈನ್ಯ ಶಿಬಿರಗಳನ್ನು ಸ್ಥಾಪಿಸಿ, ಮುಂದೆ ತಮ್ಮ ಆಡಳಿತಕ್ಕೆ ಅನುಕೂಲವಾಗುವಂತೆ ಈ ಶಿಬಿರಗಳೇ ಗ್ರಾಮ, ಪಟ್ಟಣಗಳಾಗಿ ಬೆಳೆಯುವಂತೆ ಮಾಡಿದರು. ಟ್ರೆಪೊಲಿ, ಬೆಂಗಾಸಿ ಈ ಬಂದರು ನಗರಗಳು ಬೃಹತ್ತಾಗಿ ಬೆಳೆದು ಬಂದವು. ಟೂಬ್ರೂಕ್ ಮೂರನೆಯ ದೊಡ್ಡ ನಗರವಾಗಿದೆ. ಅಜ್‍ಡಬಿಯ, ಅಲ್‍ಬೈದ, ಅಲ್‍ಖುಮ್ಸ್, ಅಲ್‍ಮರಿ, ಡರನ, ಘರಯಾನ್, ಮಿಶ್ರಟ, ಶಾಕ್‍ಅಲ್‍ಜುಮಾ ತಜುರ, ಜಂಜುರ್, ಜಿವೀಯ-ಇವು ಇತರ ಪ್ರಮುಖ ಪಟ್ಟಣಗಳು.

ಗ್ರೀಕರು ಕ್ರಿ.ಪೂ. 600 ರಲ್ಲಿ ಸಿರನೀಕ ಪ್ರದೇಶದಲ್ಲಿ ಅಂದರೆ ಈಗಿನ ಪೂರ್ವ ಲಿಬಿಯದಲ್ಲಿ ಬಂದಿಳಿದರು. ಟ್ರೆಪೊಲಿಟಾನಿಯವೆಂದು ಕರೆಯುತ್ತಿದ್ದ ಈಗಿನ ವಾಯವ್ಯ ಲಿಬಿಯಕ್ಕೆ ಕ್ರಿ. ಪೂ. 700 ರಲ್ಲಿ ಪಾಲಿನೇಷಿಯನ್ನರು ಬಂದು ನೆಲೆಸಿದರು. ಮುಂದೆ ಟ್ರೆಪೊಲಿಟಾನಿಯ ಪುರಾತನ ಬಲಿಷ್ಠ ನಗರವಾದ ಕಾರ್ತೇಜಿನ ಆಡಳಿತಕ್ಕೆ ಒಳಪಟ್ಟಿತು. ಮುಂದೆ ಸಿರನೀಕ, ಟ್ರೆಪೊಲಿಟಾನಿಯ ಈ ಎರಡೂ ಪ್ರದೇಶಗಳನ್ನು ರೋಮನ್ನರು ಆಕ್ರಮಿಸಿಕೊಂಡು ಸುಮಾರು 500 ವರ್ಷಗಳವರೆಗೆ ಆಳಿದರು. ಕ್ರಿ.ಶ. 400 ಮತ್ತು 500 ರಲ್ಲಿ ವಂಡಾಲರು ಮತ್ತು ಬೈಜಾಂಟಿಯನ್ನರು ಈ ಪ್ರದೇಶಗಳನ್ನು ಆಕ್ರಮಿಸಿಕೊಂಡರೂ ಆಳದೆ ಹಾಳುಗೆಡವಿದರು. ಕ್ರಿ.ಶ. 600ರ ಮಧ್ಯದಿಂದ 1500ರವರೆಗೆ ಅರಬ್ಬರು ಈ ಪ್ರದೇಶವನ್ನು ತಮ್ಮದಾಗಿಸಿಕೊಂಡರು. ಈ ಕಾಲದಲ್ಲೆ ಎಲ್ಲಾ ಲಿಬಿಯನ್ನರು ಅರಬ್ಬೀ ಮಾತನಾಡಲಾರಂಭಿಸಿ ಇಸ್ಲಾಮ್ ಧರ್ಮದ ಅನುಯಾಯಿಗಳಾದರು. ಟರ್ಕಿಯ ಒಟ್ಟೊಮನ್ ಚಕ್ರಾಧಿಪತ್ಯದ ಅಡಿಯಲ್ಲಿ ಲಿಬಿಯ 1500 ರಿಂದ 1900ರ ವರೆಗೆ ಇರಬೇಕಾಯಿತು. ಈ ಕಾಲದಲ್ಲೆ ಮೆಡಿಟರೇನಿಯನ್ ಸಮುದ್ರದಲ್ಲಿ ಯುರೋಪಿನ ಮತ್ತು ಅಮೆರಿಕದ ನೌಕೆಗಳ ಮೇಲೆ ಬಾರ್ಬರಿ ಹಡಗು ಕಳ್ಳರು ಹೆಚ್ಚು ದಾಳಿ ನಡೆಸಲಾರಂಭಿಸಿದರು. 1800 ರಲ್ಲಿ ಅಮೆರಿಕದ ನೌಕಾಪಡೆಗಳು ಇವರ ವಿರುದ್ಧ ಭಾರಿ ಯುದ್ಧವನ್ನೇ ಮಾಡಬೇಕಾಯಿತು. 1912 ರಲ್ಲಿ ಇಟಲಿಯು ಲಿಬಿಯವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಆಗಲೇ 1,50,00 ಇಟಲಿಯನ್ನರನ್ನು ಲಿಬಿಯದಲ್ಲಿ ನೆಲೆಸುವಂತೆ ಮಾಡಿ ಇಲ್ಲಿನ ರಸ್ತೆ, ಕಟ್ಟಡ, ಪಟ್ಟಣಗಳನ್ನು ನಿರ್ಮಿಸಲು, ನೀರಾವರಿ ಪದ್ಧತಿಯನ್ನು ಸುಧಾರಿಸಲು ಅಪಾರ ಹಣ ಖರ್ಚುಮಾಡಲಾಯಿತು. ಆದರೆ ಎರಡನೆಯ ಮಹಾಯುದ್ಧದಲ್ಲಿ ಇಟಲಿ ಸೋತು ಲಿಬಿಯವನ್ನು ಕಳೆದುಕೊಂಡಿತು. 1951ರಲ್ಲಿ ಲಿಬಿಯದ ಸ್ವಾತಂತ್ರ್ಯವನ್ನು ಸಂಯುಕ್ತ ಸಂಸ್ಥಾನ ಘೋಷಿಸಿತು. ಆಗ ಮುಸ್ಲಿಮ್ ನಾಯಕರು ಒಬ್ಬ ಮುಸ್ಲಿಮ್ ಮುಂದಾಳುವನ್ನು ರಾಜನನ್ನಾಗಿ ಲಿಬಿಯದ ಗದ್ದುಗೆ ಮೇಲೆ ಕುಳ್ಳಿರಿಸಿದರು. 1963 ರಲ್ಲಿ ಲಿಬಿಯ ಕೇಂದ್ರ ಸರ್ಕಾರದ ಆಡಳಿತಕ್ಕೆ ಸೇರಿದ ಒಂದು ರಾಜ ಪ್ರಭುತ್ವವಾಯಿತು. 1969 ರಲ್ಲಿ ಮಿಲಿಟರಿ ಅಧಿಕಾರಿಗಳು ರಾಜನನ್ನು ಪದಚ್ಯುತಗೊಳಿಸಿ ಮಿಲಿಟರಿ ಆಡಳಿತ ಸ್ಥಾಪಿಸಿದರು. ಇದರ ಮುಖ್ಯಸ್ಥ ಗಡಾಫಿ 1970 ರಲ್ಲಿ ಮುಖ್ಯಮಂತ್ರಿಯಾದ. 1969 ರಿಂದ ಲಿಬಿಯದಲ್ಲಿ 12 ಮಂದಿ ಸೇನಾಧಿಕಾರಿಗಳ ರೆವೆಲ್ಯೂಷನರಿ ಕಮಾಂಡ್ ಕೌನ್ಸಿಲ್‍ನ ಅಣತಿಯಂತೆ ಆಡಳಿತ ನಡೆಯುತ್ತಿದೆ. 1972 ರಲ್ಲಿ ಕರ್ನಲ್ ಗಡಾಫಿ ಅಧ್ಯಕ್ಷನಾದ, ಮೇಜರ್ ಅಬ್ದುಲ್ ಸಲಾಮ್ ಮುಖ್ಯಮಂತ್ರಿಯಾದ.

1955 ರಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿರುವ ಲಿಬಿಯ ಇಂದು ತೈಲೋದ್ಯಮದಿಂದ ಆರ್ಥಿಕವಾಗಿ ಬಲಗೊಂಡಿರುವ ದೇಶವಾಗಿದ್ದು ಪ್ರಪಂಚದ ಇತರೇ ದೇಶಗಳಂತೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸುತ್ತಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ